ಪತ್ರಿಕಾ ಪ್ರಕಟಣೆ
ಚಾಲಕನನ್ನು ಹೊಡೆದು ಕಾರ್ ದೋಚಿಕೊಂಡು ಹೋಗಿದ್ದ ಆರೋಪಿಗಳು ಕುರುಗೋಡು ಮತ್ತು ಕುಡುತಿನಿ ಪೊಲೀಸ್ ಅಧಿಕಾರಿಗಳಿಂದ ಪತ್ತೆ ಮತ್ತು ಬಂಧನ :
ದಿನಾಂಕ: ೧೯/೧೦/೧೪ ರಂದು ಬೆಳಿಗ್ಗೆ ೭.೦೦ ಗಂಟೆಗೆ ಶ್ರೀ.ಶ್ರೀಧರ್, ತಂದೆ: ಕಾಲತ್ರಿಮೂರ್ತಿ, ಶ್ರೀ.ಸಾಯಿ ಕಾರ್ ಡೆಕೋರ‍್ಸ್ ಮಾಲೀಕರು, ವಾಸ: ಪಟೇಲ್ ನಗರ, ಹೊಸಪೇಟೆ, ಇವರು ಕುಡುತಿನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸದರಿ ದೂರಿನಲ್ಲಿ ತನ್ನ ತಂದೆ ಶ್ರೀ.ಕಾಲತ್ರಿಮೂರ್ತಿ ರವರಿಗೆ ದಿನಾಂಕ: ೧೭/೧೦/೨೦೧೪ ರಂದು ಸಂಜೆ ೬.೩೦ ಗಂಟೆಗೆ ೩ ಜನ ಅಪರಿಚಿತ ವ್ಯಕ್ತಿಗಳು ಹೊಸಪೇಟೆಯಿಂದ ಅನಂತಪುರಕ್ಕೆ ಹೋಗಿಬರಬೇಕೆಂದು ಇಂಡಿಕಾ ಕಾರ್ ಸಂಖ್ಯೆ: ಕೆ.ಎ.೩೭/೯೫೬೬ ಇದನ್ನು ಬಾಡಿಗೆಗೆ ತೆಗೆದುಕೊಂಡು ಹೊಸಪೇಟೆಯಿಂದ ಹೊರಟಿರುತ್ತಾರೆ. ಕಾರನ್ನು ಫಿರ್ಯಾದಿದಾರರ ತಂದೆ ಶ್ರೀ.ಕಾಲತ್ರಿಮೂರ್ತಿ ರವರೇ ಚಲಾಯಿಸಿಕೊಂಡು ಹೋಗಿರುತ್ತಾರೆ. ಹೀಗಿರುವಾಗ ರಾಷ್ಟ್ರೀಯ ಹೆದ್ದಾರಿ ೬೩ ರಲ್ಲಿ ವೇಣಿ ವೀರಾಪುರ ಕ್ರಾಸ್ ಹತ್ತಿರ ಸದರಿ ೩ ಜನರು ಕಾರ್ ನಿಲ್ಲಿಸಿ ಟಾಯ್ಲೆಟ್‌ಗೆ ಹೋಗಿ ಬರುತ್ತೇವೆಂದು ಇಳಿದು ಸ್ವಲ್ಪ ಸಮಯದ ನಂತರ ವಾಪಸ್ ಬಂದು ಕಾಲತ್ರಿಮೂರ್ತಿ ರವರಿಗೆ ಮುಖಕ್ಕೆ ಯಾವುದೋ ವಸ್ತು ಸಿಂಪಡಿಸಿ, ಹೊಡೆದು, ಕೈ-ಕಾಲುಗಳನ್ನು ಹಗ್ಗದಿಂದ ಕಟ್ಟಿ ರಸ್ತೆ ಬದಿಯಲ್ಲಿ ಬಿಸಾಡಿ, ಆತನ ಮೊಬೈಲ್ ನಂಬರ್ ಮತ್ತು ಕಾರನ್ನು ತೆಗೆದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಕುಡುತಿನಿ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ. ನಂತರ ಈ ಪ್ರಕರಣದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಕಾಲತ್ರಿಮೂರ್ತಿ ರವರು ದಿನಾಂಕ: ೦೩/೧೧/೨೦೧೪ ರಂದು ಮೃತಪಟ್ಟಿರುತ್ತಾರೆ. ಆದ್ದರಿಂದ, ಸದರಿ ಪ್ರಕರಣವನ್ನು ಕೊಲೆ ಪ್ರಕರಣವೆಂದು ಪರಿಗಣಿಸಿ, ಸಿ.ಪಿ.ಐ., ಕುರುಗೋಡು ಶ್ರೀ.ಲಕ್ಷ್ಮೀಕಾಂತಯ್ಯ ರವರು ತನಿಖೆ ಕೈಗೊಂಡಿರುತ್ತಾರೆ. ತನಿಖಾ ಕಾಲದಲ್ಲಿ ಸಿ.ಪಿ.ಐ., ಕುರುಗೋಡು, ಪಿ.ಎಸ್.ಐ., ಕುಡತಿನಿ ಶ್ರೀ.ವಾಸುಕುಮಾರ್, ಹಾಗೂ ಸಿಬ್ಬಂದಿಯವರ ತಂಡವನ್ನು ರಚಿಸಿ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿರುತ್ತಾರೆ.
ಡಿ.ಎಸ್.ಪಿ., ಬಳ್ಳಾರಿ ಗ್ರಾಮೀಣ ರವರ ಮಾರ್ಗದರ್ಶನದಲ್ಲಿ ತನಿಖಾ ತಂಡವು ದಿನಾಂಕ: ೧೦/೧೧/೨೦೧೪ ರಂದು ಬೆಳಿಗ್ಗೆ ಆರೋಪಿಗಳಾದ (೧) ಟಿ.ಸುರೇಶ್‌ಬಾಬು, ತಂದೆ: ಟಿ.ಪಿ.ಶ್ರೀರಾಮುಲು, ೩೮ ವರ್ಷ, ಕಮ್ಮಾ ಜನಾಂಗ, ಕಂಟ್ರ್ಯಾಕ್ಟರ್ ವೃತ್ತಿ, ವಾಸ: ಸಿದ್ದಾರ್ಥ ನಗರ, ಬಳ್ಳಾರಿ, (೨) ರವಿವರ್ಮ, ತಂದೆ: ಶ್ರೀನಿವಾಸ್, ೨೩ ವರ್ಷ, ಕಮ್ಮಾ ಜನಾಂಗ, ಡಿಪ್ಲೊಮಾ ವಿದ್ಯಾರ್ಥಿ, ವಾಸ: ಚಪ್ಪರದಹಳ್ಳಿ, ಹೊಸಪೇಟೆ, ಇವರನ್ನು ಕ್ರಮವಾಗಿ ಬಳ್ಳಾರಿ ಮತ್ತು ಹೊಸಪೇಟೆಯಲ್ಲಿ ಪತ್ತೆ ಮಾಡಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ಸದರಿ ಆರೋಪಿಗಳನ್ನು ವಿಚಾರಣೆಗೊಳಪಡಿಸಿ, ಪ್ರಕರಣದಲ್ಲಿ ಆರೋಪಿಗಳು ದೋಚಿಕೊಂಡು ಹೋಗಿದ್ದ ಕಾರ್ ಸಂಖ್ಯೆ: ಕೆ.ಎ.೩೭/೯೫೬೬ ಇದ್ದನ್ನು ಆಂಧ್ರಪ್ರದೇಶದ ಗುತ್ತಿ ಪಟ್ಟಣದಲ್ಲಿ ವಶಪಡಿಸಿಕೊಂಡಿರುತ್ತಾರೆ. ಅದೇ ರೀತಿ ದಿನಾಂಕ: ೧೧/೧೧/೨೦೧೪ ರಂದು ಆರೋಪಿ (೩) ಶ್ರೀಮತಿ.ಪುಷ್ಪ, ಗಂಡ: ಕಾಲ ತ್ರಿಮೂರ್ತಿ, ೩೬ ವರ್ಷ, ಕಮ್ಮಾ ಜನಾಂಗ, ಬಟ್ಟೆ ವ್ಯಾಪಾರ, ವಾಸ: ಕೃಷ್ಣಾ ಟೂರಿಸ್ಟ್ ಹೋಂ ಹಿಂದುಗಡೆ, ಹೊಸಪೇಟೆ, ಇವರನ್ನು ದಸ್ತಗಿರಿ ಮಾಡಿರುತ್ತಾರೆ.
ಆರೋಪಿ ಶ್ರೀಮತಿ.ಪುಷ್ಪ ಇವರ ವಿಚಾರಣೆಯಿಂದ, ತಾನು ಈ ಪ್ರಕರಣದಲ್ಲಿನ ಕಾರ್ ಚಾಲಕ ಮತ್ತು ಮೃತ ಕಾಲತ್ರಿಮೂರ್ತಿ ಇವರ ಎರಡನೇ ಹೆಂಡತಿಯಾಗಿದ್ದು, ಕಾಲತ್ರಿಮೂರ್ತಿ ರವರು ತನಗೆ ತೊಂದರೆ ಕೊಡುತ್ತಿದ್ದನೆಂದು, ಇದಲ್ಲದೆ ತಾನು ಆರೋಪಿ ಸುರೇಶ್‌ಬಾಬುನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಕಾಲತ್ರಿಮೂರ್ತಿಯನ್ನು ಸಾಯಿಸಿದರೆ ತನಗೆ ಯಾರೂ ಅಡ್ಡಿಬರುವುದಿಲ್ಲವೆಂದು ಯೋಜನೆ ರೂಪಿಸಿಕೊಂಡು ಈ ಪ್ರಕರಣದ ಇನ್ನೊಬ್ಬ ಆರೋಪಿ ಬಿಹಾರ ರಾಜ್ಯದ ಚಂದು ₨ ಬಿಸ್ವಾಸ್ ಈತನನ್ನು ಬರಮಾಡಿಕೊಂಡು ಎಲ್ಲರೂ ಸೇರಿ ಪಿತೂರಿ ನಡೆಸಿ ಈ ಕೃತ್ಯವನ್ನು ಎಸಗಿರುವುದಾಗಿ ತಿಳಿದುಬಂದಿರುತ್ತದೆ. ಈ ಪ್ರಕರಣದಲ್ಲಿ ಇನ್ನೊಬ್ಬ ಆರೋಪಿ ಚಂದು ₨ ಬಿಸ್ವಾಸ್ ಈತನು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಪ್ರಗತಿಯಲ್ಲಿದೆ.
ಈ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾದ ಸಿ.ಪಿ.ಐ., ಕುರುಗೋಡು, ಪಿ.ಎಸ್.ಐ., ಕುಡುತಿನಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಅಧೀಕ್ಷಕರು, ಬಳ್ಳಾರಿ ರವರು ಶ್ಲಾಘಿಸಿರುತ್ತಾರೆ.
ಪೊಲೀಸ್ ಅಧೀಕ್ಷಕರು,
ಬ ಳ್ಳಾ ರಿ.
ಇವರಿಗೆ : ಜಿಲ್ಲೆಯ ಎಲ್ಲಾ ಪತ್ರಿಕಾ ವರದಿಗಾರರಿಗೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ